ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ

ಪುರಾಣ ಪ್ರಸಿದ್ಧ ಮಧೂರು ದೇವಾಲಯ

         ‘ದೇವರ ಸ್ವಂತ ನಾಡು’ ಎಂದೇ ಖ್ಯಾತವಾಗಿರುವ ಕೇರಳ ರಾಜ್ಯದ ಉತ್ತರದಲ್ಲಿನ ಸುಂದರ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಜಿಲ್ಲೆ ಕಾಸರಗೋಡು. ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನವು ಅತಿ ಪುರಾತನವೂ, ಪ್ರಸಿದ್ಧವೂ ಆಗಿರುವ ಕಾರಣಿಕ ಕ್ಷೇತ್ರವಾಗಿದೆ. ಮಾಯಿಪ್ಪಾಡಿ ಅರಮನೆಯ ರಾಜರು ಈ ದೇವಾಲಯದ ಆನುವಂಶಿಕ ಮೊಕ್ತೇಸರರಾಗಿರುವರು.

 

ಪೌರಾಣಿಕ ಹಿನ್ನೆಲೆ

         ಈ ಪ್ರಸಿದ್ಧ ದೇವಾಲಯದ ಕುರಿತು ಬ್ರಹ್ಮಾಂಡ ಪುರಾಣದಲ್ಲೂ, ಸ್ಕಂದ ಪುರಾಣದಲ್ಲೂ ಉಲ್ಲೇಖಗಳಿವೆ. ಬ್ರಹ್ಮಾಂಡ ಪುರಾಣದಲ್ಲಿ ಗರ್ಗ-ಯುಧಿಷ್ಠಿರ ಸಂವಾದ ರೂಪದಲ್ಲಿ ಪ್ರಸ್ತಾಪಿತವಾದ ಈ ದೇವಾಲಯದ ವಿಚಾರ ಹೀಗಿದೆ:

         ಪರಶುರಾಮನು ಕ್ಷತ್ರಿಯ ಕುಲವನ್ನು ನಿರ್ನಾಮಗೊಳಿಸಿದ ಬಳಿಕ ಸಮಸ್ತ ಭೂಮಿಯನ್ನೂ ಬ್ರಾಹ್ಮಣರಿಗೆ ದಾನ ಮಾಡಿದನು. ಅನಂತರ ಗೋಕರ್ಣದಿಂದ ಕನ್ಯಾಕುಮಾರಿಯ ವರೆಗೆ ಹೊಸ ಭೂಮಿಯೊಂದನ್ನು ಸಮುದ್ರ ರಾಜನಿಂದ ದಾನ ಪಡೆದನು. ತಾನು ಪಡೆದ ಹೊಸ ಭೂಮಿಯಲ್ಲಿ ಕನ್ಯಾಕುಮಾರಿಯಿಂದ ಉತ್ತರಾಭಿಮುಖವಾಗಿ ಯಾತ್ರೆ ಹೊರಟ ಪರಶುರಾಮನು ಅಲ್ಲಲ್ಲಿ ಪುಣ್ಯಕ್ಷೇತ್ರಗಳನ್ನು ನಿರ್ಮಾಣ ಮಾಡುತ್ತಾ ಮಧುಪುರಿಗೆ ತಲುಪುವನು.

ಕಿಂಚಿದ್ದೂರಂ ತತೋ ಗತ್ವಾ ಭಾರ್ಗವೋ ಭರ್ಗಸನ್ನಿಭಃ |

ವಿಘ್ನೇಶ್ವರಂ ಪ್ರತಿಷ್ಠಾಪ್ಯ ಮಧುಪುರ್ಯಾಮಪೂಜಯತ್ ||

ವಿಘ್ನೇಶ್ವರಾಲಯಂ ತತ್ರ ಕಾರಯಿತ್ವಾ ಸಮಂಟಪಂ |

ಘೃತಾಪೂಪಂ ಚ ನೈವೇದ್ಯಂ ಕಲ್ಪಯಾಮಾಸ ಶಾಶ್ವತಂ ||

ಲಕ್ಷ್ಮೀಧರದ್ವಿಜಾಯಾಥ ಕ್ಷೇತ್ರತಂತ್ರಂ ದದೌ ಪ್ರಭುಃ |

ಕ್ಷೇತ್ರಕಾರ್ಯಂ ತುರೀಯಂ ಚ ಸಾಮಂತತನಯಾಯ ಚ ||

(ಬ್ರಹ್ಮಾಂಡ ಪುರಾಣ ಅ: 27, ಶ್ಲೋಕ: 28, 29, 30)

       ಭಾವಾರ್ಥ: ಭಾರ್ಗವ ರಾಮನು ಮಧುಪುರಿಯಲ್ಲಿ ವಿಘ್ನೇಶ್ವರನನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಿದನು. ಅನಂತರ ವಿಘ್ನೇಶ್ವರನಿಗೆ ತಕ್ಕುದಾದ ಆಲಯವನ್ನು ಮಂಟಪವನ್ನು ನಿರ್ಮಾಣ ಮಾಡಿಸಿದನು. ತುಪ್ಪದಿಂದ ಮಾಡಿದ ಅಪ್ಪ ಕಜ್ಜಾಯವನ್ನು ದೇವರಿಗೆ ನಿತ್ಯವೂ ಸಮರ್ಪಣೆ ಮಾಡುವಂತೆ ವ್ಯವಸ್ಥೆ ಮಾಡಿದನು. ಕ್ಷೇತ್ರದ ಇತರ ಕಾರ್ಯಗಳನ್ನು ಸ್ಥಳೀಯನಾದ ಸಾಮಂತರಾಜನೊಬ್ಬನ ಪುತ್ರನಿಗೂ ಒಪ್ಪಿಸಿದನು.

         ಸ್ಕಂದ ಪುರಾಣದ ಸಹ್ಯಾದ್ರಿಖಂಡದಲ್ಲಿ ಪ್ರಸ್ತಾಪಿತವಾದ ಮದ್ದೂರು ವಿಘ್ನೇಶ್ವರನ ವಿಚಾರವು ಇದಕ್ಕಿಂತ ಭಿನ್ನವಾಗಿದೆ. ಪಯಸ್ವಿನೀ ನದಿಯು ಸಮುದ್ರವನ್ನು ಸೇರುವ ಸಂಗಮ ಕ್ಷೇತ್ರವು ಹಿಂದೆ ಋಷಿಗಳ ತಪೋಭೂಮಿಯಾಗಿತ್ತು. ಇಲ್ಲಿ ತ್ರೈಗರ್ತ ದ್ರಾವಿಡ ದೇಶದ ಧರ್ಮಗುಪ್ತನೆಂಬ ಅರಸನು ಯಾತ್ರಾರ್ಥಿಯಾಗಿ ಬಂದನು. ಆತ ಋಷಿಗಳ ನೇತೃತ್ವದಲ್ಲಿ ಒಂದು ಮಹಾರುದ್ರಯಾಗವನ್ನು ಮಾಡಿಸಿದನು. ಯಜ್ಞವು ಆರಂಭವಾದೊಡನೆ ಜೋರಾಗಿ ಮಳೆ ಸುರಿಯಲು ಆರಂಭವಾಯಿತು.

ಅಧ್ವರವ ತೊಡಗಿದರು ಮರೆದರು

ಬುದ್ಧಿಯಲಿ ಗಣಪತಿ ಪೂಜೆಯ

ಸಿದ್ಧಿದಾಯಕನರಿದು ಕೋಪಿಸಿ, ಮೇಘಗಳ ಕರೆದು

ನಿರ್ದಯದ ಅಪ್ಪಣೆಯ ಕೊಟ್ಟನು

ಹೊದ್ದಿರುವ ಕಾಶ್ಮೀರ ತೀರದೊ

ಳಿದ್ದ ಯಜ್ಞದ ಶಾಲೆ ಮುಳುಗುವ ತೆರದಿ ಮಳೆಯಾಯ್ತು.

(ಕನ್ನಡ ಸಹ್ಯಾದ್ರಿ ಖಂಡ – ವಿಘ್ನೇಶ ಕ್ಷೇತ್ರ ಮಾಹಾತ್ಮ್ಯೆ)

         ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೈಗೊಂಡ ಯಜ್ಞವು ಅಪೂರ್ಣವಾಯಿತು. ಋಷಿಗಳು ಕಂಗಾಲಾದರು. ಅವರು ಕುಮಾರಧಾರ ಕ್ಷೇತ್ರಕ್ಕೆ ಹೋಗಿ ವಾಸುಕೀಶ್ವರನಲ್ಲಿ ತಮಗೆ ಒದಗಿ ಬಂದ ಸಂಕಷ್ಟವನ್ನು ಭಿನ್ನವಿಸಿಕೊಂಡರು. ಆಗ ವಾಸುಕೀಶ್ವರನು –

         “ಎಲೈ ಋಷಿಪುಂಗವರೇ, ನೀವು ಯಜ್ಞಾರಂಭದಲ್ಲಿ ವಿಘ್ನೇಶ್ವರನನ್ನು ಪೂಜಿಸದಿದ್ದುದರಿಂದಾಗಿ, ಯಜ್ಞಕ್ಕೆ ಆತಂಕವುಂಟಾಗಿದೆ ನೀವು ಕೂಡಲೇ ಹೋಗಿ ಕಾಶ್ಮೀರ (ಮಧುವಾಳಿನೀ) ನದಿಯ ದಡದಲ್ಲಿ ವಿಘ್ನೇಶ್ವರನ ಒಂದು ಭಾವಚಿತ್ರವನ್ನಾದರೂ ಬರೆದು ತಾತ್ಕಾಲಿಕವಾಗಿ ಪೂಜಿಸಿರಿ. ನಿಮ್ಮ ವಿಘ್ನ ನಿವಾರಣೆಯಾಗುವುದು. ಅನಂತರ ಯಥಾ ಪ್ರಕಾರ ಯಾಗವನ್ನು ಮುಂದುವರಿಸಿರಿ” ಎಂದು ನಿರೂಪ ಕೊಟ್ಟರು.

         ವಾಸುಕಿಯ ನಿರೂಪದಂತೆ ಋಷಿಗಳು ಕಾಶ್ಮೀರ ನದಿಯ ತೀರದಲ್ಲಿ ಗಣಪತಿಯ ಭಿತ್ತಿಚಿತ್ರವನ್ನು ಬರೆದರು. ಭಕ್ತಿಯಿಂದ ಪೂಜಿಸಿದರು. ಯಾವುದೇ ಅಡ್ಡಿ ಆತಂಕಗಳಿಲ್ಲದೆ ಯಜ್ಞವು ಪೂರ್ತಿಗೊಂಡಿತು. ಈ ದೈವಿಕ ಘಟನೆಯಿಂದಾಗಿ ಸಂತುಷ್ಟನಾದ ರಾಜನು ವಿಘ್ನೇಶ್ವರನ ಭಿತ್ತಿಚಿತ್ರದ ಸುತ್ತಲೂ ಒಂದು ಪುಟ್ಟ ಗೋಪುರವನ್ನು ಕಟ್ಟಿಸಿದನು. ತಾನು ಯಜ್ಞ ಮಾಡಿಸಿದ ಆ ಪುಣ್ಯ ಸ್ಥಳದಲ್ಲಿಯೇ ಒಂದು ಶಿವಾಲಯವನ್ನೂ ಸಮೆಯಿಸಿದನು. ಅಲ್ಲಿ ಶ್ರೀ ಮದನೇಶ್ವರ ಲಿಂಗವನ್ನು ಪ್ರತಿಷ್ಠೆ ಮಾಡಿಸಿದನು.

         ಮಧೂರು ಕ್ಷೇತ್ರದ ಕುರಿತು ಪುರಾಣಗಳಲ್ಲಿ ದೊರೆಯುವ ಈ ಎರಡು ಉಲ್ಲೇಖಗಳೂ, ವಿಭಿನ್ನ ಆಶಯಗಳನ್ನು ಒಳಗೊಂಡಿದ್ದರೂ, ಇಲ್ಲಿನ ವಿಘ್ನೇಶ್ವರ ಮೂರ್ತಿಯು ಅತಿ ಪುರಾತನವಾದ ಒಂದು ಪ್ರತಿಷ್ಠೆ ಎಂಬಂಶವನ್ನು ಎರಡು ಪುರಾಣಗಳು ಸ್ಪಷ್ಟಪಡಿಸುತ್ತವೆ. ಅದರಲ್ಲಿಯೂ ಬ್ರಹ್ಮಾಂಡ ಪುರಾಣದಲ್ಲಿ ಸ್ಕಂದ ಪುರಾಣಕ್ಕಿಂತ ಹೆಚ್ಚಿನ ವಾಸ್ತವಿಕಾಂಶ ಇರುವುದನ್ನು ಮನಗಾಣಬಹುದು. ಬ್ರಹ್ಮಾಂಡ ಪುರಾಣದಲ್ಲಿ ಹೇಳಿದಂತೆ ಈಗಲೂ ‘ಘೃತಾಪೂಪ’ (ತುಪ್ಪದಲ್ಲಿ ತಯಾರಿಸಿದ ಅಪ್ಪ)  ನೈವೇದ್ಯವು ವಿಘ್ನೇಶ್ವರನಿಗೆ ಸಮರ್ಪಣೆಯಾಗುತ್ತಿರುವುದು ಒಂದು ಪೌರಾಣಿಕ ಸತ್ಯವೇ ಸರಿ. ಅಲ್ಲದೆ ಸ್ಕಂದ ಪುರಾಣದಲ್ಲಿ ಹೇಳಲಾದ ಭಿತ್ತಿ ಚಿತ್ರವು ಈಗ ಮಧೂರಲ್ಲಿಲ್ಲ. ಈಗ ಮಧೂರಲ್ಲಿರುವುದು ವಿಘ್ನೇಶ್ವರನ ಉಬ್ಬುಶಿಲ್ಪದ ಮೂರ್ತಿ. ಭಿತ್ತಿಚಿತ್ರದ ಸ್ಥಾನದಲ್ಲಿ ಈ ಉಬ್ಬುಶಿಲ್ಪವು ರಚಿತವಾಗಿರಲೂಬಹುದು. ಈ ಶಿಲ್ಪವು ಕಡುಶರ್ಕರ ಪಾಕದಿಂದ ತಯಾರಿಸಲಾದುದೆಂಬುದು ಎಲ್ಲರಿಗೂ ತಿಳಿದ ವಿಷಯ.

         ಕ್ರಿಸ್ತಶಕ 11ನೇ ಶತಮಾನದವರಾದ ಕಾವುಗೋಳಿಯ ತ್ರಿವಿಕ್ರಮ ಪಂಡಿತಾಚಾರ್ಯನ ಮಗ ನಾರಾಯಣ ಪಂಡಿತಾಚಾರ್ಯನು ಬರೆದ ‘ಮಧ್ವವಿಜಯ’ದಲ್ಲಿ ಮಧೂರಿನ ಕುರಿತು ಹೀಗೆ ಬರೆದಿದೆ;

ಸಮಯೇನ ಗತೋs ಮಹೀಯಸಾಸೌ

ವಿಷಯಂ ಸ್ತಂಭಪದೋಪಸರ್ಜನಾಖ್ಯಂ

ಮದನಾಧಿಪತೇಃ ಸುಧಾಮ ಧಾಮ

ಪ್ರವಿವೇಶಾಖಿಲಲೋಕವಂದನೀಯ

(ಸರ್ಗ: 13, ಶ್ಲೋಕ: 9)

ಮದನೇಶ್ವರವಲ್ಲಭ ಪ್ರದೇಶೇಯಂ

ಪ್ರಭುಮಾಯಾಂತಮಥಾಭ್ಯಪದ್ಯತ ದ್ರಾಕ್

ಜಯಸಿಂಹ ಇಮಂ ನೃಸಿಂಹವರ್ಯಃ

ಶುಭಧೀಃ ಸ್ತಂಭವಿಶಿಷ್ಟ ಸಿಂಹನಾಮಾ

(ಸರ್ಗ: 13, ಶ್ಲೋಕ: 148)

         ಕುಂಬಳೆಯ ಜಯಸಿಂಹ ರಾಜೇಂದ್ರನ ವಿನಂತಿಯಂತೆ ಮಧ್ವಾಚಾರ್ಯರು ಕಬೆನಾಡಿಗೆ ಚಿತ್ತೈಸಿ, ಅಲ್ಲಿ ಮದನಾಧಿಪತಿ ದೇವಾಲಯವನ್ನು ಸಂದರ್ಶಿಸಿ, ಶ್ರೀಮದನೇಶ್ವರನನ್ನು ಪೂಜಿಸಿ ಅಲ್ಲಿಂದ ವಿಷ್ಣುಮಂಗಲಕ್ಕೆ ಪ್ರಯಾಣಿಸಿದರು ಎಂಬ ವಿವರಣೆ ಬರುತ್ತದೆ. ಈ ವಿವರಣೆಯ ಪ್ರಕಾರ, ಅತಿ ಪುರಾತನ ಕಾಲದಲ್ಲಿ ಕುಂಬಳೆ ಸೀಮೆಯ ಈ ಪ್ರದೇಶಕ್ಕೆ ‘ಕಬೆನಾಡು’ ಎಂಬ ಹೆಸರಿತ್ತೆಂದು ತಿಳಿದು ಬರುತ್ತದೆ. ಕೋಲತ್ತುನಾಡಿನ ಉತ್ತರಪ್ರದೇಶವೇ ಕಬೆನಾಡು. ಕಬೆನಾಡು ತುಳುನಾಡಿನ ಒಂದು ಭಾಗವಾಗಿ ಪರಿಗಣಿಸಲ್ಪಟ್ಟಿತ್ತು. ‘ಕಬೆ’ ಎಂದರೆ ತುಳುವಿನಲ್ಲಿ ‘ಕಂಬ’ ಎಂದು ಅರ್ಥ. ಕಬೆನಾಡಿನ ರಾಜನಾದ ಜಯಸಿಂಹನನ್ನು ಮಧ್ವವಿಜಯದಲ್ಲಿ ‘ಸ್ತಂಭ ವಿಶಿಷ್ಟ ಸಿಂಹನಾಮಾ’ ಎಂದು ವರ್ಣಿಸಿದೆ.

         ಏಳುನೂರು ವರ್ಷಗಳ ಹಿಂದೆ ‘ಕಬೆನಾಡು’ ಅನಂತರ ‘ಕುಂಬಳೆ ಸೀಮೆ’ಯಾಗಿ, ಈಗ ‘ಕಾಸರಗೋಡು ಜಿಲ್ಲೆ’ಯಾಗಿದೆ. ಹಾಗೆಯೇ ಏಳುನೂರು ವರ್ಷಗಳ ಹಿಂದಿನ ‘ಮದನೇಶ್ವರ ದೇವಾಲಯ’ವು ಅನಂತರ ‘ಮದವೂರೇಶ್ವರ’ ದೇವಾಲಯವಾಗಿ ಈಗ ‘ಮಧೂರು ದೇವಾಲಯ’ವೆನಿಸಿದೆ.

         ಹಿಂದೆ ‘ಮದನೇಶ್ವರ’ ಎಂದು ಪ್ರಸಿದ್ಧವಾದ ಈ ಹೆಸರಿನ ಪೂರ್ವದಲ್ಲಿ ‘ಶ್ರೀ’ ಸೇರಿಕೊಂಡಾಗ ವಿದ್ವಾಂಸರಿಗೆ ಅರ್ಥೈಸಲು ತೊಡಕಾಯಿತು. ಅವರು ‘ಶ್ರೀ’ ಎಂಬ ಪದವನ್ನು ‘ಶ್ರೀಮದ್’ ಎಂದು ವಿಂಗಡಿಸಿ, ‘ಶ್ರೀಮದ್ + ಅನೇಶ್ವರ’ ಎಂದು ಅರ್ಥವನ್ನು ಹೊಂದಿಸಿಕೊಳ್ಳಲಾಗದಿದ್ದಾಗ, ‘ಶ್ರೀಮದನ + ಈಶ್ವರ’ ಎಂಬ ಅರ್ಥವನ್ನೇ ಮುಂದಿಟ್ಟುಕೊಂಡು, ಇನ್ನೂ ಹೆಚ್ಚಿನ ಅರ್ಥ ಸ್ಪಷ್ಟತೆಗಾಗಿ ‘ಶ್ರೀಮದನಾಂತ + ಈಶ್ವರ’ (ಮದನನ್ನು ಅಂತ್ಯಗೊಳಿಸಿದ ಈಶ್ವರ) = ಶ್ರೀ ಮದನಂತೇಶ್ವರ ಎಂದು ವ್ಯಾಖ್ಯಾನಿಸಿದರೂ, ಈ ಅರ್ಥನಿಪ್ಪತ್ತಿ, ಬಹುಕಾಲ ಉಳಿಯದೆ ಜನರ ಬಾಯಿಯಲ್ಲಿ ‘ಶ್ರೀಮದನಂತೇಶ್ವರ’ (ಶ್ರೀಮತ್ + ಅನಂತೇಶ್ವರ) ಎಂದೇ ಆಯಿತು.

 

ಜಾನಪದ ಹಿನ್ನೆಲೆ

         ಜಾನಪದ ಹೇಳಿಕೆಗಳಂತೆ ಮದವೂರಿನ ಶಿವಲಿಂಗವು ‘ಮದರು’ ಎಂಬ ಹರಿಜನ ಸ್ತ್ರೀಗೆ ದೊರೆತುದೆಂದು ಹೇಳಲಾಗುತ್ತದೆ. ಮದರು ಎಂಬಾಕೆ ಕುಳೋವುತ್ತಡ್ಕ ಅಥವಾ ಉಳಿಯತಡ್ಕ (ಮಧೂರಿನಿಂದ ಸುಮಾರು 2 ಕಿಲೋಮೀಟರುಗಳಷ್ಟು ಪಶ್ಚಿಮದಲ್ಲಿರುವ ಕಾಡುಪೊದಗಳು ತುಂಬಿದ್ದ ಪ್ರದೇಶ) ದಲ್ಲಿ ಸೊಪ್ಪು ಹೆರೆಯುತ್ತಿದ್ದಾಗ ಆಕೆಯ ಕತ್ತಿಯು ಲಿಂಗಾಕಾರದ ಒಂದು ಕಲ್ಲಿಗೆ ತಾಗಿ ರಕ್ತವು ಹರಿಯಿತೆಂದೂ, ಈ ಅದ್ಭುತವನ್ನು ಆಕೆ ಸೀಮೆಯ ಅರಸರಿಗೆ ತಿಳಿಸಿದಾಗ, ಅವರು ಆಶ್ಚರ್ಯಪಟ್ಟು, ಅದು ಕಾರಣೀಕ ಯುಕ್ತವಾದ ಶಿವಲಿಂಗವಿರಬೇಕೆಂದು ಊಹಿಸಿ, ಕೂಡಲೇ ಶಿಲ್ಪಿಗಳನ್ನು ಕರೆಸಿ ಬೃಹದಾಕಾರವಾದ ದೇವಾಲಯವನ್ನು ನಿರ್ಮಿಸಲು ಆಜ್ಞೆ ಮಾಡಿದರೆಂದೂ, ದೇವಾಲಯದ ಕೆಲಸವು ಪೂರ್ತಿಯಾದ ಬಳಿಕ, ಶುಭಮಹೂರ್ತದಲ್ಲಿ ಆ ಶಿವಲಿಂಗವನ್ನು ಅಲ್ಲಿ ಪ್ರತಿಷ್ಠೆಮಾಡಿಸಿದರೆಂದೂ ಐತಿಹ್ಯವಿದೆ.

         ಅಂತೂ ವ್ಯತ್ಯಸ್ತವಾದ ಪೌರಾಣಿಕ ಉಲ್ಲೇಖಗಳು, ಜಾನಪದ ಹೇಳಿಕೆಗಳು, ಚಾರಿತ್ರಿಕ ದಾಖಲೆಗಳು – ಇವೆಲ್ಲ ಈ ದೇವಾಲಯದ ಅತಿ ಪುರಾತನವಾದ ಅಸ್ತಿತ್ವಕ್ಕೆ ಸಾಕ್ಷಿಯಾಗಿವೆಯೆಂಬುದಂತೂ ನಿಸ್ಸಂದೇಹ.

         ಕುಂಬಳೆ ಅರಸೊತ್ತಿಗೆಗೆ ಸಂಬಂಧಿಸಿದ ಪ್ರಧಾನವಾದ ನಾಲ್ಕು ದೇವಾಲಯಗಳಲ್ಲೊಂದಾದ ಮಧೂರು ದೇವಾಲಯವು, ಸೀಮೆಯ ಭಕ್ತ ಜನರ ಪ್ರಥಮ ಆರಾಧನಾ ಕೇಂದ್ರವಾಗಿದೆ. ಸೀಮೆಯ ಭಕ್ತ ಜನರು ನಡೆಸುವ ಶುಭ ಶೋಭನಾದಿ ಸಮಸ್ತ ಕಾರ್ಯಗಳ ಆರಂಭದಲ್ಲಿಯೂ ಮಧೂರು ದೇವಾಲಯಕ್ಕೆ ಬಂದು ಹರಕೆ ಒಪ್ಪಿಸುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬರುವ ವಾಡಿಕೆಯಾಗಿದೆ.

         ಶ್ರೀ ಮದನೇಶ್ವರ ಪಾದಪದ್ಮಾರಾಧಕನೆಂಬ ಬಿರುದಾವಳಿಯುಳ್ಳ ಕುಂಬಳೆಯ ಅರಸೊತ್ತಿಗೆಯ ಮೊದಲ ರಾಜನಾದ ಒಮ್ಮಡಿ ಜಯಸಿಂಹನು ದಕ್ಷಿಣದಿಂದ ದಂಡೆತ್ತಿಕೊಂಡು ಬಂದ ಪಾಂಡ್ಯರಾಜನನ್ನು ಜಯಿಸಿದ ಸವಿನೆನಪಿಗಾಗಿ ಪ್ರತಿಷ್ಠಾಪಿಸಿದ ವಿಜಯಸ್ತಂಭವು ಮಧೂರು ದೇವಾಲಯದ ಈಶಾನ್ಯ ಭಾಗದಲ್ಲಿ ಈಗಲೂ ಇದೆ. ಈತನ ಕಾಲದಲ್ಲಿ ಬರೆಸಿದುದೆನ್ನಲಾದ ಕನ್ನಡ ಮತ್ತು ಸಂಸ್ಕೃತ ಭಾಷೆಯ ಒಂದೊಂದು ಶಾಸನಗಳು ಪಯಸ್ವಿನಿ ತೀರದ ತಳಂಗರೆಯಲ್ಲೂ, ತುಳುಭಾಷೆಯ ಒಂದು ಶಾಸನವು ಅನಂತಪುರದಲ್ಲಿಯೂ ಇರುವುದನ್ನು ಕಾಣಬಹುದು.

         ಮಧೂರು ದೇವಾಲಯವು ಗಜಪೃಷ್ಠಾಕಾರದಲ್ಲಿ ಕೆತ್ತಿಸಿರುವ ಒಂದು ಅಪೂರ್ವ ದೇವಾಲಯವಾಗಿದ್ದು, ವಾಸ್ತು ಶಿಲ್ಪಸೌಂದರ್ಯದಿಂದ ಕೂಡಿ ನಯನ ಮನೋಹರವಾಗಿದೆ. ಅಮೇರಿಕಾದ ಮಿಸ್ಸೂರಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕನೂ, ಕೇರಳದ ಪ್ರಾಚೀನ ಕಲೆಯ ಸಂಶೋಧಕನೂ ಆದ ವಿಲಿಯಂ ಎ. ನೋಬಲ್ ಎಂಬ ವಿದ್ವಾಂಸನು ಈ ದೇವಾಲಯದ ವಾಸ್ತುಶಿಲ್ಪ ಸೌಂದರ್ಯವನ್ನು ಮನಸಾರೆ ಮೆಚ್ಚಿ, ಇಂತಹ ಅಪೂರ್ವ ಕಲಾ ಪ್ರೌಢಿಮೆಯನ್ನು ಇಲ್ಲಿನ ಭಕ್ತಜನರು ಶಾಶ್ವತವಾಗಿ ಉಳಿಸಿಕೊಳ್ಳದಿರಲಾರರು ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾನೆ.

         ಕ್ರಿ.ಶ 1784 ರಲ್ಲಿ ಕುಂಬಳೆ ಸೀಮೆಗೆ ದಂಡೆತ್ತಿ ಬಂದ ಟಿಪ್ಪುಸುಲ್ತಾನನು ಈ ದೇವಾಲಯಕ್ಕೂ ಧಾಳಿ ಮಾಡಿದ್ದನೆಂದೂ, ಈ ಮಧ್ಯೆ ಬಾಯಾರಿಕೆಯಿಂದ ತತ್ತರಿಸಿದ ಆತನು ದೇವಸ್ಥಾನದ ಚಂದ್ರಶಾಲೆಯೊಳಗಿನ ಬಾವಿಯ ನೀರನ್ನು ಕುಡಿದನೆಂದೂ, ನೀರನ್ನು ಕುಡಿದ ಬಳಿಕ ಆತನ ಮನಃ ಪರಿವರ್ತನೆಯಾಗಿ, ದೇವಸ್ಥಾನವನ್ನು ಧಾಳಿ ಮಾಡುವ ಉದ್ದೇಶವನ್ನು ಕೈಬಿಟ್ಟನೆಂದೂ ಹಿರಿಯರ ಅಂಬೋಣವಿದೆ. ಈ ಅಂಬೋಣಕ್ಕೆ ಸಾಕ್ಷಿಯಾಗಿರುವ ಟಿಪ್ಪು ಸುಲ್ತಾನನ ಖಡ್ಗದ ಹೊಡೆತದ ಕುರುಹು, ಚಂದ್ರಶಾಲೆಯ ತಾಮ್ರದ ತಗಡಿನ ಮೇಲೆ ಈಗಲೂ ಇರುವುದನ್ನು ಕಾಣಬಹುದು.

         ಕ್ರಿ.ಶ 1901ರಲ್ಲಿ ಕುಂಬಳೆ ಅರಸರು ಈ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡಿದ್ದರೆಂದು, ದೇವಾಲಯದ ಮುಂಭಾಗದಲ್ಲಿರುವ ಧ್ವಜಸ್ತಂಭದ ಕಲ್ಲಿನ ಮೇಲೆ ಹಾಸಿರುವ ತಾಮ್ರದ ಹೊದಿಕೆಯ ಮೇಲಿರುವ ಬರಹದಿಂದ ತಿಳಿದು ಬರುತ್ತದೆ. ದೇವಸ್ಥಾನಕ್ಕೆ ಸರಕಾರದಿಂದ ಆರುನೂರು ರೂಪಾಯಿಗಳ ತಸದೀಕು ದೊರೆಯುತ್ತದೆ.

         ದೇವಸ್ಥಾನದ ಪ್ರಧಾನ ಗರ್ಭಗುಡಿಯಲ್ಲಿರುವ ಅಧಿದೇವತೆ ಶ್ರೀ ಮದನಂತೇಶ್ವರ. ಅದೇ ಆವರಣದೊಳಗೆ ಉತ್ತರ ಭಾಗದಲ್ಲಿ ದಕ್ಷಿಣಭಿಮುಖವಾಗಿ ಗರ್ಭಗುಡಿಯೊಳಗೆ ಇರುವ ಆರಾಧ್ಯದೇವತೆ ಶ್ರೀ ಮಹಾಗಣಪತಿ. ಸ್ಥೂಲಕಾಯನೂ, ಲಂಬೋದರನೂ ಆಗಿ ಕಂಗೊಳಿಸುವ ವಿಘ್ನೇಶ್ವರ ಮೂರ್ತಿಯನ್ನು ಭಕ್ತಜನರು, ತಮ್ಮ ಭಕ್ತಿಯ ಪಾರವಶ್ಯದ ಸಲುಗೆಯಿಂದ ‘ಬೊಡ್ಡಜ್ಜ’ನೆಂದೇ ಕರೆಯುವುದು ವಾಡಿಕೆ.

         ದೇವಸ್ಥಾನದ ಹೊರ ಆವರಣದೊಳಗೆ ಎಡಬಲ ಬದಿಗಳಲ್ಲಿ ಎರಡು ಶಿವಾಲಯಗಳು, ನೈರುತ್ಯದಲ್ಲಿ ಶಾಸ್ತಾರನ ಗುಡಿಯೂ, ವಾಯವ್ಯದಲ್ಲಿ ದುರ್ಗಾದೇವಾಲಯವೂ, ಈಶಾನ್ಯದಲ್ಲಿ ಸುಬ್ರಹ್ಮಣ್ಯನ ಮಂದಿರವೂ ಇದ್ದು, ವಿವಿಧ ದೇವತೆಗಳ ಸಾನಿಧ್ಯದಿಂದ ಈ ನೆಲವು ಪಾವನವಾಗಿದೆಯೆಂದು ಭಕ್ತ ಜನರ ನಂಬುಗೆ.

         ಪ್ರತಿ ವರ್ಷವೂ ದೀಪಾವಳಿಯಿಂದ ತೊಡಗಿ ವೃಷಭಮಾಸ 15ನೆಯ ದಿನದವರೆಗೆ ದಿನಕ್ಕೆ ಮೂರು ಬಾರಿ ಶ್ರೀಮದನಂತೇಶ್ವರ ಮೂರ್ತಿಯು ನಿತ್ಯಬಲಿ ಉತ್ಸವ ಜರಗುತ್ತದೆ. ಪ್ರತಿ ಸೋಮವಾರ, ಶುಕ್ರವಾರ ಮತ್ತು ಪ್ರದೋಷದ ದಿನಗಳಲ್ಲಿ ವಿಶೇಷ ಪೂಜೆಗಳು ಜರಗುತ್ತವೆ.

         ಮೇಷ (ವಿಷು) ಸಂಕ್ರಮಣದ ದಿನ ಇಲ್ಲಿ ವರ್ಷಾವಧಿ ಉತ್ಸವದ ಆರಂಭ ಧ್ವಜಾರೋಹಣ. ಮರುದಿನ ಅಂದರೆ ಹೊಸ ವರ್ಷಾರಂಭದ ದಿನ ಪೂರ್ವಾಹ್ನ ರಾಜಾಂಗಣದಲ್ಲಿ ಪ್ರಸಾದ ವಿತರಣೆ. ಇದು ಅತ್ಯಂತ ಮಹತ್ವದ ಒಂದು ಸಮಾರಂಭವಾಗಿದ್ದು, ಸಾವಿರಾರು ಮಂದಿ ಭಕ್ತ ಜನರು ಈ ಸಮಾರಂಭದಲ್ಲಿ ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸುತ್ತಾರೆ. ನಾಲ್ಕನೆಯ ದಿವಸ ಶ್ರೀದೇವರ ಮೂಲಸ್ಥಾನವಾದ ‘ಉಳಿಯತಡ್ಕ’ಕ್ಕೆ ಶ್ರೀದೇವರ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡುಹೋಗಿ, ಅಲ್ಲಿ ವಿಶೇಷ ಪೂಜೆಯಾಗಿ ಹಿಂದಿರುಗುವುದು ಪೂರ್ವಪದ್ಧತಿ. ಐದನೆಯ ದಿವಸ ಶ್ರೀದೇವರಿಗೆ ಅವಭೃತ ಸ್ನಾನ ಹಾಗೂ ಧ್ವಜಾವರೋಹಣವಾಗಿ ಉತ್ಸವವು ಮುಕ್ತಾಯಗೊಳ್ಳುತ್ತದೆ. ವಿಷು ಸಂಕ್ರಮಣವು ವರ್ಷದ ಕೊನೆಯ ದಿನವೂ,  ಮರುದಿನದ ಯುಗಾದಿಯು ವರ್ಷದ ಆರಂಭ ದಿನವೂ ಆಗಿರುವುದರಿಂದ, ಈ ಸಂದರ್ಭದಲ್ಲಿ ಜರಗುವ ಮಧೂರು ಉತ್ಸವವು ವರ್ಷದ ಕೊನೆಯ ಉತ್ಸವವೂ, ಹಾಗೆಯೇ ವರ್ಷದ ಆರಂಭದ ಉತ್ಸವವೂ ಆಗಿದೆಯೆಂದು ಜನರ ಹೇಳಿಕೆ. ಹೀಗೆ ಕುಂಬಳೇ ಸೀಮೆಯ ಜನರ ಜೀವನವು ‘ಮಂಗಲಾದೀನಿ – ಮಂಗಲಾಂತಾನಿ’ ಆಗಿದೆಯೆಂದರೂ ಅತಿಶಯವಲ್ಲ.

         ತೆಂಕುತಿಟ್ಟಿನ ಯಕ್ಷಗಾನದ ಮೂಲ ಪುರುಷನೂ ರಾಮಾಯಣಾದಿ ಪ್ರಸಂಗಗಳ ಕರ್ತನು ಆಗಿರುವ ಕವಿ ಪಾರ್ಥಿಸುಬ್ಬನು ‘ಮದವೂರ ವಿಘ್ನೇಶ್ವರನ’ ಅನನ್ಯ ಭಕ್ತರಾಗಿದ್ದಾರೆ. ಹಾಗೆಯೇ ಕವಿಗಳಾದ ಬನ್ನೂರು ನಾರಾಯಣ ಭಾಗವತ, ಕುದ್ರೆಪ್ಪಾಡಿ ಈಶ್ವರಯ್ಯ, ಮುಂಡೋಡಲ ನಾರಾಯಣ, ಕಾಸರಗೋಡು ಸುಬ್ಬರಾಯ, ಚವರ್ಕಾಡು ಶಂಭು ಭಟ್ಟ, ತೋಟಿ ತಿಮ್ಮಯ್ಯ ಭಟ್ಟ, ಆಲಂಕೂಡು ರಾಮಕೃಷ್ಣಯ್ಯ ಮುಂತಾದ ಈ ಪ್ರದೇಶದ ಹೆಚ್ಚಿನ ಯಕ್ಷಗಾನ ಕವಿಗಳೂ ಮದವೂರು ವಿಘ್ನೇಶ್ವರನನ್ನು ಸ್ತುತಿಸಿಯೇ ತಮ್ಮ ಕಾವ್ಯಾರಂಭ ಮಾಡಿದ್ದಾರೆ.

         ಹೀಗೆ ಕವಿಗಳ ಇಷ್ಟ ದೇವತೆಯೂ, ಭಕ್ತಜನರ ಕಾಮಧೇನುವೂ, ಸೀಮೆಯ ಮೊದಲ ಆರಾಧ್ಯದೈವವೂ ಆಗಿರುವ ವಿಘ್ನೇಶ್ವರನ ಮತ್ತು ಶ್ರೀ ಮದನಂತೇಶ್ವರನ ದೇವಾಲಯವು ಶೋಭಿಸುವ ಮಧೂರು ಕ್ಷೇತ್ರವು ಇಂದು ಸಾವಿರಾರು ಮಂದಿ ಯಾತ್ರಿಕರು ಬಂದು ಹೋಗುವ ದಕ್ಷಿಣ ಭಾರತದ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ.

ವಿದ್ವಾನ್ ವೆಂಕಟರಾಜ ಪುಣಿಂಚತ್ತಾಯ

Loading